ಕೆನಡದ ಸಂವಿಧಾನ ಮತ್ತು ಆಡಳಿತ ವ್ಯವಸ್ಥೆ

ಕೆನಡದ ಇಂದಿನ ಸಂವಿಧಾನ 1867ರ ಬ್ರಿಟಿಷ್ ಉತ್ತರ ಅಮೆರಿಕ ಅಧಿನಿಯಮವನ್ನೆ ಆಧಾರವಾಗಿಟ್ಟುಕೊಂಡು ರೂಪಿತವಾಗಿದೆ. ಈ ಅಧಿನಿಯಮದ ಪ್ರಕಾರ ಅಂದು ಅಸ್ತಿತ್ವದಲ್ಲಿದ್ದ ನಾಲ್ಕು ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಕೆನಡ ಅಧಿರಾಜ್ಯ ಎಂಬ ಸಂಯುಕ್ತರಾಜ್ಯವನ್ನು ನಿರ್ಮಿಸಲಾಯಿತು. ನ್ಯೂ ಬ್ರನ್‍ಸ್óವಿಕ್, ನೋವ ಸ್ಕೋಷ, ಆಂಟೇರಿಯೋ, ಕ್ವಿಬೆಕ್ ಇವೇ ಅಂದಿನ ನಾಲ್ಕು ಪ್ರಾಂತ್ಯಗಳು. ಈ ಸಂಯುಕ್ತರಾಜ್ಯ ವ್ಯವಸ್ಥೆ ಇಂದಿಗೂ ಅಸ್ತಿತ್ವದಲ್ಲಿದೆ. ಕೆನಡದ ಸಂವಿಧಾನ ತಾತ್ತ್ವಿಕವಾಗಿ ಬ್ರಿಟನಿನ ಸಂವಿಧಾನಕ್ಕನುಗುಣವಾಗಿಯೇ ಇರಬೇಕೆಂದು ಇದರಲ್ಲಿ ನಮೂದಿಸಲಾಗಿತ್ತು. ಅದರಂತೆ ಕೆನಡ ಸಂಯುಕ್ತರಾಜ್ಯದ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಗಳು ಮತ್ತು ಆಡಳಿತ ವ್ಯವಸ್ಥೆ ಬ್ರಿಟಿಷ್ ಮಾದರಿಯಲ್ಲಿಯೇ ರೂಪಿತವಾಗಿವೆ. ಇಂದು ಕೆನಡ ಸಂಯುಕ್ರರಾಜ್ಯದ ಪ್ರಾಂತ್ಯಗಳ ಸಂಖ್ಯೆ ನಾಲ್ಕರಿಂದ ಹತ್ತಕ್ಕೆ ಏರಿದೆ. ನ್ಯೂ ಫೌಂಡ್‍ಲೆಂಡ್, ನೋವ ಸ್ಕೋಷ, ನ್ಯೂ ಬ್ರನ್‍ಸ್óವಿಕ್, ಪ್ರಿನ್ಸ್ ಎಡ್ವರ್ಡ್ ಐಲೆಂಡ್, ಕ್ವಿಬೆಕ್, ಆಂಟೇರಿಯೋ, ಮ್ಯಾನಿಟೋಬ, ಸ್ಯಾಸ್ಕ್ಯಾಚೆವನ್, ಆಲ್ಬರ್ಟ ಮತ್ತು ಬ್ರಿಟಿಷ್ ಕೊಲಂಬಿಯ-ಇವು ಈಗಿನ ಪ್ರಾಂತ್ಯಗಳು, ಯೂಕಾನ್ ಮತ್ತು ವಾಯವ್ಯ ಪ್ರದೇಶಗಳೂ ಕೆನಡಕ್ಕೆ ಸೇರಿವೆ.
ಕೆನಡದ ಪ್ರಾಂತ್ಯಗಳಿಂದ ಮತ್ತು ಬ್ರಿಟಿಷ್ ಸಂಸತ್ತಿನಿಂದ ಅಂಗೀಕೃತವಾದ 1867ರ ಬ್ರಿಟಿಷ್ ಉತ್ತರ ಅಮೆರಿಕ ಅಧಿನಿಯಮ ಸಾಕಷ್ಟು ವಿಶದವಾಗಿದ್ದು ಅದರಲ್ಲಿ 145 ವಿಧಿಗಳು ಮತ್ತು 5 ಅನುಬಂಧಗಳು ಇವೆ. ಕಾಲಕಾಲಕ್ಕೆ ಈ ಮೂಲ ಅಧಿನಿಯಮದಲ್ಲಿ ತಿದ್ದುಪಡಿಗಳಾಗಿ ಅದರ ಗಾತ್ರ ಇನ್ನೂ ಹೆಚ್ಚಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಅಧಿಕಾರ ಬ್ರಿಟಿಷ್ ಸಂಸತ್ತಿಗೆ ಇದ್ದರೂ ರೂಢಿಯಲ್ಲಿ ಕೆನಡದ ಸಂಸತ್ತಿನ ಶಿಫಾರಸಿನಂತೆಯೇ ಅದನ್ನು ಮಾಡಲಾಗುತ್ತಿತ್ತು. ಆದರೆ 1949ರಲ್ಲಿ ಕೆನಡದ ಇಪ್ಪತ್ತೊಂದನೆಯ ಸಂಸತ್ತಿನ ಕೋರಿಕೆಯ ಮೇರೆಗೆ ಈ ಅಧಿಕಾರವನ್ನು ಕೆನಡದ ಸಂಸತ್ತಿಗೆ ವಹಿಸಿಕೊಡಲಾಯಿತು. ಆದರೂ ಪ್ರಾಂತ್ಯಗಳಿಗೆ ಸಂಬಂಧಿಸಿದ ಮತ್ತು ಪ್ರಾಂತ್ಯಗಳ ಮೇಲೆ ಪರಿಣಾಮ ಉಂಟುಮಾಡುವಂಥ ಕೆಲವು ವಿಷಯಗಳು ಕೇಂದ್ರೀಯ ಅಥವಾ ಪ್ರಾಂತೀಯ ಅಧಿಕಾರವ್ಯಾಪ್ತಿಯ ಒಳಗೆ ಬರುವುದಿಲ್ಲ.

ಸಂಯುಕ್ತರಾಜ್ಯ ವ್ಯವಸ್ಥೆ

ಕೆನಡದ ಸಂವಿಧಾನದ (ಬ್ರಿಟಿಷ್ ಉತ್ತರ ಅಮೆರಿಕ ಅಧಿನಿಯಮ 1867) ಪ್ರಕಾರ ಕೆನಡ ಸಂಯುಕ್ತರಾಜ್ಯವಾಗಿದೆ. ಈ ರಾಜ್ಯವ್ಯವಸ್ಥೆಯಲ್ಲಿ ಆಟ್ಟವದಲ್ಲಿರುವ ಕೇಂದ್ರ ಅಥವಾ ಸಂಯುಕ್ತ ಸರ್ಕಾರ ಮತ್ತು ಹತ್ತು ಪ್ರಾಂತ್ಯಗಳ ಸರ್ಕಾರಗಳ ನಡುವೆ ಅಧಿಕಾರದ ವಿತರಣೆಯಾಗಿದೆ. ಕೇಂದ್ರ ಸರ್ಕಾರಕ್ಕೆ ಹೆಚ್ಚು ಅಧಿಕಾರ ಕೊಡಲಾಗಿದೆ. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಕೇಂದ್ರ ಸರ್ಕಾರದ ಅಧಿಕಾರದ ಅಭಾವದಿಂದಲೇ ಅಲ್ಲಿ ಅಂತರ್ಯುದ್ಧಕ್ಕೆಡೆಯಾಯಿತೆಂದು ಈ ದೇಶದ ಜನ ಭಾವಿಸಿದ್ದರು. ಆದ್ದರಿಂದಲೇ ಕೆನಡದಲ್ಲಿ ತದ್ವಿರುದ್ದವಾಗಿ ಪ್ರಾಂತ್ಯ ಸರ್ಕಾರಗಳ ಅಧಿಕಾರಗಳನ್ನು ನಮೂದಿಸಿ ಉಳಿದೆಲ್ಲ ಅಧಿಕಾರಗಳನ್ನೂ ಕೇಂದ್ರಕ್ಕೆ ಕೊಡಮಾಡಲಾಗಿದೆ. ಇದರಿಂದ ಕೇಂದ್ರಸರ್ಕಾರದ ಬಲಸಂವರ್ಧನೆಯಾಗುವುದು ಸಹಜ. ಕೆನಡದ ಕೇಂದ್ರಸರ್ಕಾರದ ಸಂಪೂರ್ಣ ಅಧಿಕಾರಕಕ್ಷೆಯಲ್ಲಿ ರಕ್ಷಣೆ, ಅಂಚೆ, ನಾಣ್ಯ, ಬ್ಯಾಂಕುಗಳು, ವಿವಾಹ, ವಿವಾಹ ವಿದಚ್ಛೇದನ, ದಂಡನ್ಯಾಯ, ಪೌರತ್ವ, ಮೀನುಗಾರಿಕೆ, ಜನಗಣತಿ, ಹಡಗು ಸಾರಿಗೆ, ಅಂತರಪ್ರಾಂತ್ಯ ಮತ್ತು ಅಂತರ ರಾಷ್ಟ್ರೀಯ ಜಲಮಾರ್ಗ ಮುಂತಾದ ವಿಷಯಗಳು ಸೇರಿವೆ. ತೆರಿಗೆಗಳನ್ನು ವಿಧಿಸುವ ಹಾಗೂ ಸಾಲ ಎತ್ತುವ ಅಧಿಕಾರವೂ ಅದಕ್ಕಿದೆ. ಪ್ರಾಂತ್ಯ ಸರ್ಕಾರಗಳಿಗೆ 16 ವಿಷಯಗಳ ಮೇಲೆ ಅಧಿಕಾರವನ್ನು ಕೊಡಲಾಗಿದೆ. ತಮ್ಮ ಪ್ರಾಂತ್ಯದ ಸಂವಿಧಾನಕ್ಕೆ ತಿದ್ದುಪಡಿ ತರುವುದು (ಲೆಫ್ಟನಂಟ್ ಗವರ್ನರನ ಸ್ಥಾನಮಾನಗಳನ್ನು ಹೊರತುಪಡಿಸಿ), ಪ್ರಾಂತ್ಯದೊಳಗೆ ತೆರಿಗೆ ವಿಧಿಸುವುದು, ಸಾಲ ಎತ್ತುವುದು, ಮುಂತಾದ ಸ್ಥಳೀಯ ಮಹತ್ತ್ವದ ವಿಷಯಗಳನ್ನು ಪ್ರಾಂತ್ಯ ಸರ್ಕಾರಗಳಿಗೆ ವಹಿಸಿಕೊಡಲಾಗಿದೆ.

ಕಾರ್ಯಾಂಗ

ಕೆನಡ ಸಂಯುಕ್ತರಾಜ್ಯದ ಕಾರ್ಯಾಂಗದ ಅಧಿಕರಗಳು ರಾಜನಿಗೆ ಸೇರಿವೆ. ಅವನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಕೆನಡದ ಗವರ್ನರ್-ಜನರಲನೇ ಪ್ರಮುಖ. ಗವರ್ನರ್-ಜನರಲನ ಸ್ಥಾನಮಾನಗಳು ಹೆಚ್ಚು ಕಡಿಮೆ ಬ್ರಿಟನಿನ ದೊರೆತನದವನ್ನೆ ಹೋಲುತ್ತವೆ. ಆದರೆ ಇವನು ಅನುವಂಶಿಕವಾಗಿ ಅಧಿಕಾರದಲ್ಲಿರುವುದಿಲ್ಲ; ರಾಣಿಯಿಂದ (ರಾಜನಿಂದ) ನೇಮಕವಾಗುತ್ತಾನೆ. ಈ ನೇಮಕ ನಾಮಮಾತ್ರ. ಮೂಲತ: ಕೆನಡದ ಪ್ರಧಾನಮಂತ್ರಿ ತನ್ನ ಮಂತ್ರಿಮಂಡಲದೊಂದಿಗೆ ಚರ್ಚಿಸಿ ಸೂಚಿಸಿದ ವ್ಯಕ್ತಿಯನ್ನೆ ಬ್ರಿಟನಿನ ರಾಣಿ (ದೊರೆ) ನೇಮಕ ಮಾಡುವುದು. ಆದರೂ ಗವರ್ನರ್-ಜನರಲ್ ರಾಣಿಯ (ದೊರೆಯ) ಪ್ರತಿನಿಧಿ ಎಂದೇ ಪರಿಗಣಿಸತಕ್ಕದ್ದು. ಗವರ್ನರ್-ಜನರಲನ ಅಧಿಕಾರಾವಧಿ 5 ಅಥವಾ 6 ವರ್ಷಗಳು. ಆದರೂ ಅದಕ್ಕೆ ಮುಂಚೆಯೇ ಅವನನ್ನು ತೆಗೆಯಲು ಬರುತ್ತದೆ. ಕೆನಡದ ಗವರ್ನರ್-ಜನರಲನಿಗೆ ಬ್ರಿಟಿಷ್ ದೊರೆಯಂತೆ (ಅಥವಾ ರಾಣಿಯಂತೆ) ನಾಮಮಾತ್ರ ಅಧಿಕಾರ ಇದ್ದರೂ ಆತನಿಗೆ ಬ್ರಿಟಿಷ್ ದೊರೆಗಿಂತ ಹೆಚ್ಚು ಪ್ರಾಧಾನ್ಯವುಂಟು. ನ್ಯಾಯಾಧೀಶರು, ಆಯುಕ್ತರು ಪ್ರಾಂತ್ಯಗಳ ಲೆಫ್ಟನಂಟ್-ಗವರ್ನರ್‍ಗಳು ಮುಂತಾದವರ ನೇಮಕ, ಪ್ರಧಾನಮಂತ್ರಿ ಮತ್ತು ಇತರ ಮಂತ್ತಿಗಳ ನೇಮಕ, ಅವರನ್ನು ತೆಗೆದುಹಾಕುವುದು ಮುಂತಾದವು ಪ್ರಮುಖವಾದವು. ಆತ ದೇಶದ ಸೈನ್ಯದ ಪ್ರಮುಖನೂ ಆಗಿರುತ್ತಾನೆ. ಪ್ರಧಾನ ಮಂತ್ರಿ ಮತ್ತು ಇತರ ಮಂತ್ರಿಗಳ ನೇಮಕ ಮತ್ತು ವಜಾ ಮಾಡುವ ಅಧಿಕಾರಗಳು ನಾಮಮಾತ್ರ. ಈ ಅಧಿಕಾರಗಳನ್ನು ಆತ ಚಲಾಯಿಸುವುದು ಶಾಸಕಾಂಗದ ನಿರ್ಣಯದ ಮೇರೆಗೆ.

ಪ್ರಿವಿ ಕೌನ್ಸಿಲ್

ಗವರ್ನರ್-ಜನರಲನಿಗೆ ದೇಶದ ಆಡಳಿತವನ್ನು ನಡೆಸಿಕೊಂಡು ಹೋಗುವ ಕಾರ್ಯದಲ್ಲಿ ಸಲಹೆ ನೀಡಲು ಮತ್ತು ಆಡಳಿತದ ಮೇಲ್ವಿಚಾರಣೆ ಮಾಡಲು ಪ್ರಿವಿ ಕೌನ್ಸಿಲ್ ಎಂಬ ಸಮಿತಿಯನ್ನು ನಿಯುಕ್ತಗೊಳಿಸಲಾಗಿತ್ತು. ಆದರೆ ಈ ಸಮಿತಿಯ ಸಂಖ್ಯೆ ಹೆಚ್ಚಾಗಿದ್ದುದರಿಂದ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗದಾಯಿತು. ಆದ್ದರಿಂದ ಗವರ್ನರ್-ಜನರಲ್ ಈ ಸಮಿತಿಯಿಂದಲೇ ಆಯ್ದುಕೊಂಡ ಕೆಲವು ಸದಸ್ಯರ ಒಂದು ಸಣ್ಣ ಸಮಿತಿಯನ್ನು ರಚಿಸಿಕೊಳ್ಳತೊಡಗಿದ. ಈ ಸಣ್ಣ ಸಮಿತಿಯೇ ಕ್ರಮೇಣ ಬಲಯುತವಾಯಿತಲ್ಲದೆ ಮುಂದೆ ಅದು ಪ್ರಿವಿ ಕೌನ್ಸೀಲ್‍ಗಿಂತ ಪ್ರಮುಖವಾಗಿ, ಸಂಪುಟವಾಯಿತು.

ಸಂಪುಟ

ಸಂಪುಟದ ಸದಸ್ಯರ ಆಯ್ಕೆಯ ಬಗ್ಗೆ ಯಾವ ನಿರ್ದಿಷ್ಟ ನಿಯಮಗಳೂ ಇಲ್ಲ. ಆದರೂ ಬ್ರಿಟನ್ನಿನಲ್ಲಿ ಪಾಲಿಸುತ್ತಿರುವ ಸಂಪ್ರದಾಯದಂತೆಯೇ ಕೆನಡದ ಮಂತ್ರಿ ಮಂಡಲವನ್ನು ರಚಿಸಲಾಗುತ್ತದೆ. ಈ ಮಂಡಳಿ ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವೆ ಸಂಪರ್ಕವನ್ನು ಕಲ್ಪಿಸುವ ಸಮಿತಿಯಾಗಿದೆ. ಸರ್ಕಾರದ ಎಲ್ಲ ಅಧಿಕಾರಗಳೂ ಈ ಮಂತ್ರಿಮಂಡಲದ ಕೈಯಲ್ಲಿದ್ದು ಗವರ್ನರ್-ಜನರಲನವೆಂದು ಹೇಳಲಾದ ಎಲ್ಲ ಅಧಿಕಾರದಲ್ಲಿರುತ್ತದೆ. ಪ್ರಧಾನಮಂತ್ರಿಯೇ ಸಂಪುಟದ ಪ್ರಮುಖ. ಸಂಪುಟವನ್ನು ಅವನೇ ರಚಿಸುತ್ತಾನೆ. ಸಂಪುಟಸದಸ್ಯರನ್ನು ಅವನ ಸಲಹೆಯಂತೆ ಗವರ್ನರ್-ಜನರಲ್ ನೇಮಿಸುತ್ತಾನೆ. ಅವನು ಇದರ ಕೋನಶಿಲೆ ಇದ್ದಂತೆ. ಆತ ರಾಜಿನಾಮೆ ಕೊಟ್ಟರೆ ಇಡೀ ಸಂಪುಟ ಅಧಿಕಾರದಿಂದ ಕೆಳಗಿಳಿಯುತ್ತದೆ.

ಶಾಸಕಾಂಗ

ಸಂವಿಧಾನದನ್ವಯ ಕೆನಡದ ಶಾಸನಾಧಿಕಾರ ಬ್ರಿಟನಿನಲ್ಲಿದ್ದಂತೆ ರಾಣಿಯಿಂದ ಕೂಡಿದ ಸಂಸತ್ತಿಗೆ ಸೇರಿದ್ದಾಗಿದೆ. ರಾಣಿಯ ಪ್ರತಿನಿಧಿಯಾಗಿ ಗವರ್ನರ್-ಜನರಲ್ ಇರುತ್ತಾನೆ. ಕೆನಡದ ಸಂಪತ್ತು ಕಾಮನ್ಸ್ ಸಭೆ ಕೆಳಗಿನ ಸದನ. ಅದು ಜನರಿಂದ ಚುನಾಯಿತರಾದ ಪ್ರತಿನಿಧಿಗಳಿಂದ ಕೂಡಿದ್ದು. ಸಾಮಾನ್ಯವಾಗಿ 5 ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಗಳು ಜರುಗುತ್ತವೆ. ಆದರೂ ಅದಕ್ಕೂ ಮೊದಲೇ ಈ ಸಭೆಯನ್ನು ವಿಸರ್ಜಿಸಬಹುದಾಗಿದೆ. ಈ ಸಭೆಯ ಸದಸ್ಯರ ಸಂಖ್ಯೆಯನ್ನು ನಿಗದಿ ಮಾಡಿಲ್ಲ. ಅದು ಕಾಲಕಾಲಕ್ಕೆ ಬದಲಾಗುತ್ತದೆ. ಏಕೆಂದರೆ, ಪ್ರತಿ ಜನಗಣತಿಯ ಅನಂತರವೂ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ಪ್ರಾಂತ್ಯದಿಂದ ಚುನಾಯಿತರಾಗುವ ಸದಸ್ಯರ ಸಂಖ್ಯೆಯನ್ನು ನಿಗದಿಗೊಳಿಸಲಾಗುವುದು. ಕೆನಡದಲ್ಲಿ ವಯಸ್ಕರ ಮತದಾನ ಪದ್ಧತಿಯಿದೆ. 21 ವರ್ಷ ತುಂಬಿ, ಬ್ರಿಟಿಷ್ ನಾಗರಿಕರಾಗಿದ್ದು 12 ತಿಂಗಳು ಕೆನಡದಲ್ಲಿ ವಾಸವಾಗಿರುವವರು ಮತದಾನ ಮಾಡಬಹುದು. ಆದರೆ ನ್ಯಾಯಾಧೀಶರು, ಚುನಾವಣಾ ಮುಖ್ಯಾಧಿಕಾರಿ, ಚುನಾವಣಾ ಸಿಬ್ಬಂದಿ, ಚುನಾವಣೆಗಳಲ್ಲಿ ಭ್ರಷ್ಟಾಚಾರಕ್ಕಾಗಿ ಶಿಕ್ಷೆಗೊಳಗಾದವರು ಮುಂತಾದವರು ಮತದಾನ ಮಾಡುವಂತಿಲ್ಲ. ಕಾಮನ್ಸ್ ಸಭೆಯ ಕಲಾಪಗಳನ್ನು ನಡೆಸಲು ಒಬ್ಬ ಸಭಾಪತಿ ಮತ್ತು ಉಪಸಭಾಪತಿಗಳನ್ನು ಆರಿಸಲಾಗುತ್ತದೆ. ಈ ಸಭೆಯ ಕಲಾಪಗಳು ಹೆಚ್ಚು ಕಡಿಮೆ ಬ್ರಿಟನಿನ ಕಾಮನ್ಸ್ ಸಭೆಯ ಮಾದರಿಯಲ್ಲಿಯೇ ನಡೆಯುತ್ತವೆ. ಸೆನೆಟ್ ಸಭೆ ಕೆನಡ ಸಂಸತ್ತಿನ ಮೇಲಿನ ಸದನ. ಇದರಲ್ಲಿ 96 ಸದಸ್ಯರಿರುತ್ತಾರೆ. ಗವರ್ನರ್-ಜನರಲ್ ಇದರ ಸದಸ್ಯರ ಸಂಖ್ಯೆಯನ್ನು 104ಕ್ಕೆ ಮೀರದಂತೆ ಹೆಚ್ಚಿಸಬಹುದು. ಸೆನೆಟ್ ಸದಸ್ಯರನ್ನು ಮಂತ್ರಿ ಮಂಡಲದ ಸಲಹೆಯ ಮೇರೆಗೆ ಗವರ್ನರ್-ಜನರಲ್ ನಾಮಕರಣ ಮಾಡುತ್ತಾನೆ. ಅವರು ಅಜೀವ ಸದಸ್ಯರಾಗಿ ಉಳಿಯುತ್ತಾರೆ.

ನ್ಯಾಯಾಂಗ

ಕೆನಡದಲ್ಲಿ ಕೇಂದ್ರೀಯ ಮತ್ತು ಪ್ರಾಂತೀಯ ಎಂದು ಎರಡು ಬಗೆಯ ನ್ಯಾಯಾಲಯಗಳಿವೆ. ಬ್ರಿಟಿಷ್ ಉತ್ತರ ಅಮೆರಿಕ ಅಧಿನಿಯಮದ ಪ್ರಕಾರ ಪಡೆದಿವೆ. ಇದರಂತೆ ಪ್ರಾಂತ್ಯಗಳಲ್ಲಿ ಮೂರು ವಿಧದ ನ್ಯಾಯಾಲಯಗಳುಂಟು: ಶ್ರೇಷ್ಠ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯಗಳು ಮತ್ತು ಕೌಂಟಿ ನ್ಯಾಯಾಲಯಗಳು. ಇವುಗಳ ನ್ಯಾಯಾಧೀಶರನ್ನು ಗವರ್ನರ್-ಜನರಲನೇ ನೇಮಿಸುತ್ತಾನೆ. ಸಿವಿಲ್ ಮತ್ತು ಕ್ರಿಮಿನಲ್ ವಿಷಯಗಳು ಇವುಗಳ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಪ್ರಾಂತ್ಯ ನ್ಯಾಯಾಲಯಗಳಲ್ಲದೆ ಎರಡು ಕೇಂದ್ರ ನ್ಯಾಯಾಲಯಗಳು, ಸರ್ವೋಚ್ಚ ನ್ಯಾಯಾಲಯ ದೇಶದ ಅತ್ಯುನ್ನತ ನ್ಯಾಯಾಧೀಶರನ್ನೊಳಗೊಂಡಿರುತ್ತದೆ. ಇವರು ಗವರ್ನರ್-ಜನರಲನಿಂದ ನೇಮಕವಾಗುತ್ತಾರೆ. ಸಂಸತ್ತಿನ ಉಭಯ ಸದನಗಳ ನಿರ್ಣಯದ ಮೂಲಕ ಇವರನ್ನು ಪದಚ್ಯುತಗೊಳಿಸಬಹುದು.

ಸಾರ್ವಜನಿಕ ಆಡಳಿತ

ಕೆನಡದ ಸಂಯುಕ್ತಸರ್ಕಾರದಲ್ಲಿ ಸುಮಾರು ಇಪ್ಪತ್ತು ಇಲಾಖೆಗಳಿವೆ. ಇವು ದೇಶದ ಆಡಳಿತದ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ. ಪ್ರತಿಯೊಂದು ಇಲಾಖೆಯೂ ಒಬ್ಬ ಸಚಿವನ ನಿಯಂತ್ರಣಕ್ಕೊಳಪಟ್ಟಿರುತ್ತದೆ. ಮೊದಮೊದಲು ಸೇವಾ ಸಿಬ್ಬಂದಿಯ ಭರ್ತಿಯ ನಿಯಮಗಳಿರಲಿಲ್ಲ. ಈಚೆಗೆ ಅರ್ಹತೆಯ ತತ್ತ್ವವನ್ನು ಹೆಚ್ಚಾಗಿ ಪಾಲಿಸಲಾಗುತ್ತಿದೆ. ಕೆಲವೇ ವರ್ಷಗಳ ಹಿಂದೆ ಈ ದೇಶದಲ್ಲಿ ಆಡಳಿತ ಸಿಬ್ಬಂದಿಯನ್ನು ನೇಮಿಸುವ ಕಾರ್ಯಗಳನ್ನು ವೈಧಾನಿಕವಾಗಿ ನಿರ್ವಹಿಸುವ ದೃಷ್ಟಿಯಿಂದ ಲೋಕಸೇವಾ ಅಯೋಗವನ್ನು ನೇಮಿಸಲಾಯಿತು.

ರಾಜಕೀಯ ಪಕ್ಷಗಳು

ಕೆನಡದಲ್ಲಿ ಲಿಬರಲ್ ಮತ್ತು ಕನ್‍ಸರ್ವೆಟಿವ್ ಎಂಬ ಎರಡು ಪ್ರಮುಖ ರಾಜಕೀಯ ಪಕ್ಷಗಳಿವೆ. ಆದರೆ ಈಚೆಗೆ ಕೆಲವು ಹೊಸ ಸಣ್ಣ ಪುಟ್ಟ ಪಕ್ಷಗಳು ತಲೆ ಎತ್ತಿವೆ. ಕೋ-ಆಪರೇಟಿವ್ ಕಾಮನ್‍ವೆಲ್ತ್ ಫೆಡರೇಷನ್, ಯುನೈಟೆಡ್ ಫಾರ್ಮರ್ಸ್ ಅಂಡ್ ಇಂಡಿಪೆಂಡೆಂಟ್ಸ್-ಇವು ಇತ್ತೀಚೆಗೆ ತಲೆಯೆತ್ತಿರುವ ಎರಡು ಪಕ್ಷಗಳು. ಇವು ಕಾಮನ್ಸ್ ಸಭೆಯಲ್ಲಿ ಪ್ರಭಾವ ಬೀರುವಲ್ಲಿ ಹೆಚ್ಚು ಸಫಲವಾಗಿಲ್ಲ. ಅಲ್ಲಿಯ ಇತರ ಹಲವು ಸಂಸ್ಥೆಗಳಂತೆ ರಾಜಕೀಯ ಪಕ್ಷಗಳೂ ಬ್ರಿಟಿಷ್ ಮೂಲದಿಂದ ಉದ್ಭವಿಸಿ ಉತ್ತರ ಅಮೆರಿಕದ ಪರಿಸರದಿಂದ ಪ್ರಭಾವಿತವಾಗಿದೆ. ಒಂದೊಂದು ಪಕ್ಷದಲ್ಲೂ ಬ್ರಿಟನಿನ ಪಕ್ಷದಲ್ಲಿರುವಂತೆ ಎಡದಿಂದ ಬಲದ ವರೆಗೆ ನಾನಾ ಅಭಿಪ್ರಾಯಗಳ ಛಾಯೆಗಳನ್ನು ಕಾಣಬಹುದು. ಆದರೆ ಅಮೆರಿಕ ಸಂಯುಕ್ತಸಂಸ್ಥಾನದಲ್ಲಿರುವಂತೆ ಪಕ್ಷಪಕ್ಷಗಳ ನಡುವೆಯೂ ಪಕ್ಷದೊಳಗಿನ ವಿವಿಧ ಗುಂಪುಗಳ ನಡುವೆಯೂ ತೀವ್ರ ಭಿನ್ನತೆಗಳೂ ಇವೆ.     			 
	(ಎ.ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ